ಸತ್ತು ಹೋಗಿದ್ದಾಳೆಂದು ಭಾವಿಸಿದ್ದ ಮಗಳಿಂದ ಬಂತು ವಿಡಿಯೋ ಕಾಲ್; ಅಂತ್ಯಕ್ರಿಯೆ ನೆರವೇರಿಸಿದ್ದ ಕುಟುಂಬಸ್ಥರಿಗೆ ಬಿಗ್ ಶಾಕ್.!



ಬಿಹಾರದ ಪಾಟ್ನಾದಲ್ಲಿ ಅಚ್ಚರಿಯ ವಿದ್ಯಮಾನವೊಂದು ನಡೆದಿದೆ. ತಿಂಗಳ ಹಿಂದೆ ನಾಪತ್ತೆಯಾಗಿದ್ದ ತಮ್ಮ ಮಗಳು ಶವವಾಗಿ ಪತ್ತೆಯಾಗಿದ್ದಾಳೆ ಎಂದು ಭಾವಿಸಿದ್ದ ಕುಟುಂಬ ಆಕೆಯ ಅಂತ್ಯಕ್ರಿಯೆ ನೆರವೇರಿಸಿದ್ದು, ಈ ಸುದ್ದಿ ತಿಳಿದ ಮಗಳು ತನ್ನ ತಂದೆಗೆ ವಿಡಿಯೋ ಕಾಲ್ ಮಾಡಿ 'ಅಪ್ಪ ನಾನಿನ್ನು ಬದುಕಿದ್ದೇನೆ' ಎಂದು ಹೇಳಿದ್ದಾಳೆ. ಇದರಿಂದ ಕುಟುಂಬಸ್ಥರಿಗೆ ಸಂತಸವಾಗುವುದರ ಜೊತೆಗೆ ತಾವು ಅಂತ್ಯಕ್ರಿಯೆ ನೆರವೇರಿಸಿದ್ದ ಶವ ಯಾರದ್ದು ಎಂದು ಆಘಾತಕ್ಕೊಳಗಾಗಿದ್ದಾರೆ.


ಪ್ರಕರಣದ ವಿವರ:

ಅಂಶುಕುಮಾರ್ ಎಂಬಾಕೆ ತಿಂಗಳ ಹಿಂದೆ ನಾಪತ್ತೆಯಾಗಿದ್ದು, ಆಕೆಗಾಗಿ ಹುಡುಕಾಟ ನಡೆಸಿದ್ದ ಕುಟುಂಬ ಸದಸ್ಯರು ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಿಸಿದ್ದರು. ಆದರೆ ಇತ್ತೀಚೆಗೆ ಯುವತಿಯೊಬ್ಬಳ ಶವ ಪತ್ತೆಯಾಗಿದ್ದು ಮುಖ ಗುರುತಿಸಲಾಗದಷ್ಟು ವಿರೂಪಗೊಂಡಿತ್ತು. ಆದರೆ ಧರಿಸಿದ್ದ ಉಡುಪಿನ ಆಧಾರದ ಮೇಲೆ ಇದು ತಮ್ಮ ಮಗಳದ್ದೇ ಎಂದು ಹೇಳಿದ ಅಂಶುಕುಮಾರಿ ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.


ಈ ಸುದ್ದಿ ಅಂಶು ಕುಮಾರಿಗೂ ತಿಳಿದು ಬಂದಿದ್ದು ಕೂಡಲೇ ತನ್ನ ತಂದೆಗೆ ಕರೆ ಮಾಡಿ ತಾನು ಜೀವಂತವಾಗಿರುವುದಾಗಿ ತಿಳಿಸಿದ್ದಾಳೆ. ಪ್ರೀತಿಸಿದವನನ್ನು ಮದುವೆಯಾಗಲು ಮನೆ ಬಿಟ್ಟು ಬಂದಿದ್ದಾಗಿ ಆಕೆ ತಿಳಿಸಿದ್ದು, ಅತ್ತೆ – ಮಾವನ ಮನೆಯಲ್ಲಿ ಇರುವುದಾಗಿ ಮಾಹಿತಿ ನೀಡಿದ್ದಾಳೆ. ನಾಪತ್ತೆಯಾಗಿದ್ದ ಮಗಳು ಇನ್ನು ಬದುಕಿದ್ದಾಳೆ ಎಂದು ತಿಳಿದು ಕುಟುಂಬಸ್ಥರು ಸಂತಸಗೊಂಡಿದ್ದು, ಮತ್ಯಾರದೋ ಶವವನ್ನು ಅಂತ್ಯಕ್ರಿಯೆ ನಡೆಸಿರುವುದಕ್ಕೆ ಶಾಕ್ ಆಗಿದ್ದಾರೆ. ಇದರ ಮಧ್ಯೆ ಹೆಚ್ಚಿನ ತನಿಖೆ ನಡೆಸಿದ ಪೊಲೀಸರಿಗೆ ಸಾವನ್ನಪ್ಪಿದ ಯುವತಿಯನ್ನು ಆಕೆಯ ಕುಟುಂಬ ಸದಸ್ಯರೇ ಮರ್ಯಾದೆಗೇಡು ಹತ್ಯೆ ಮಾಡಿರುವುದು ತಿಳಿದು ಬಂದಿದೆ. ಇದೀಗ ನಾಪತ್ತೆಯಾಗಿರುವ ಅವರನ್ನು ಬಂಧಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.